ಬಸ್ತಾರ್
	ಮಧ್ಯ ಪ್ರದೇಶ ರಾಜ್ಯದ ಅತ್ಯಂತ ದಕ್ಷಿಣ ಭಾಗದಲ್ಲಿರುವ ಒಂದು ಜಿಲ್ಲೆ. ಉ.ಅ. 17o 46'-20o 14' ಮತ್ತು ಪೂ.ರೇ 80o 15'-82o 15' ನಡುವೆ ವ್ಯಾಪಿಸಿದೆ. ಈ ಜಿಲ್ಲೆಯ ಉತ್ತರದಲ್ಲಿ ಮಧ್ಯಪ್ರದೇಶದ ದುರ್ಗ ಜಿಲ್ಲೆ, ಈಶಾನ್ಯದಲ್ಲಿ ರಾಯಪುರ ಜಿಲ್ಲೆ, ಪಶ್ಚಿಮದಲ್ಲಿ ಮಹಾರಾಷ್ಟ್ರದ ಚಂದಾ ಜಿಲ್ಲೆ, ಪೂರ್ವದಲ್ಲಿ ಒರಿಸ್ಸದ ಕೋರಾಪುಟ್ ಜಿಲ್ಲೆ ಮತ್ತು ದಕ್ಷಿಣದಲ್ಲಿ ಆಂಧ್ರ ಪ್ರದೇಶದ ಖಮ್ಮಮ್ ಜಿಲ್ಲೆ ಇವೆ. ಬ್ರಿಟಿಷ್ ಭಾರತದಲ್ಲಿ ಬಸ್ತಾರ್ ಒಂದು ಸಂಸ್ಥಾನವಾಗಿತ್ತು. ಸಂಸ್ಥಾನಗಳ ವಿಲೀನೀಕರಣವಾದಾಗ ಬಸ್ತಾರ್ ಮತ್ತು ಕಾಂಕೇರ್ ಸಂಸ್ಥಾನಗಳನ್ನು ಸೇರಿಸಿ ಬಸ್ತಾರ್ ಜಿಲ್ಲೆಯನ್ನು ರಚಿಸಲಾಯಿತು. ಈ ಜಿಲ್ಲೆಯ ವಿಸ್ತೀರ್ಣ 39,060 ಚ.ಕಿಮೀ. ಜನಸಂಖ್ಯೆ 1,842,854 (1981) ಜಿಲ್ಲೆಯ ಆಡಳಿತ ಕೇಂದ್ರ ಜಗದಾಲ್‍ಪುರ.

	ಜಿಲ್ಲೆಯ ದಕ್ಷಿಣ ಭಾಗದ ಮಧ್ಯದಲ್ಲಿ ದಕ್ಷಿಣೋತ್ತರವಾಗಿ ಬೈಲದಿಲ್ಲ ಶ್ರೇಣಿ ಹಬ್ಬಿದೆ. ಇಲ್ಲಿ ಕಬ್ಬಿಣ ಅದುರಿನ ನಿಕ್ಷೇಪಗಳಿವೆ. ಈ ಶ್ರೇಣಿಯ ಪಶ್ಚಿಮಕ್ಕಿರುವ ನೆಲ ಗೋದಾವರಿ ನದಿಯ ಕಡೆಗೆ ಇಳಿಜಾರಾಗಿದೆ. ಜಿಲ್ಲೆಯ ಪೂರ್ವಭಾಗ ಸ್ಥೂಲವಾಗಿ ಪ್ರಸ್ಥಭೂಮಿಯಾಗಿದೆ. ಇದರ ಎತ್ತರ 457-610 ಮೀ. ಜಗದಾಲ್‍ಪುರ ಇರುವುದು ಈ ಭಾಗದಲ್ಲೇ. ಪಕ್ಕದ ಒರಿಸ್ಸದ ಕೋರಾಪುಟ್ ಜಿಲ್ಲೆಯಿಂದ ಇಲ್ಲಿಗೆ ಇಂದ್ರಾವತಿ ನದಿ ಹರಿದು ಬರುತ್ತದೆ. ಇದು ಜಗದಾಲ್‍ಪುರದ ಉತ್ತರದಲ್ಲಿ ಸಾಗಿ ಜಗದಾಲ್‍ಪುರದ ಪಶ್ಚಿಮಕ್ಕೆ ಸುಮಾರು 96 ಕಿಮೀ. ದೂರದಲ್ಲಿ ಚಿತ್ರಕೋಟ್ ಬಳಿ ಪ್ರಸ್ಥಭೂಮಿಯನ್ನು ಬಿಟ್ಟು ಮುಂದೆ ಹರಿಯುತ್ತದೆ. ಇದು ಪ್ರಸ್ಥಭೂಮಿಯಿಂದ ಇಳಿಯುವ ಎಡೆಯಲ್ಲಿ ಒಂದು ಸುಂದರ ಜಲಪಾತವಿದೆ. ಈ ನದಿ ಪಶ್ಚಿಮಾಭಿಮುಖವಾಗಿ ಮುಂದುವರಿದು ಜಿಲ್ಲೆಯ ಪಶ್ಚಿಮಗಡಿಯಲ್ಲಿ ಸ್ವಲ್ಪ ದೂರ ಗಡಿ ಎಲ್ಲೆಯಾಗಿ ಹರಿದು ದಕ್ಷಿಣಕ್ಕೆ ತಿರುಗಿ ಸಾಗಿ ಗೋದಾವರಿಯನ್ನು ಸೇರಿಕೊಳ್ಳುತ್ತದೆ. ಜಿಲ್ಲೆಯ ಈಶಾನ್ಯ ಭಾಗದಲ್ಲಿ ಮಹಾನದಿ ಹರಿದು ಗಡಿಯನ್ನು ದಾಟಿ ಮುಂದುವರಿಯುತ್ತದೆ.

	ಜಿಲ್ಲೆಯ ಬಹುಭಾಗ ಅರಣ್ಯಾವೃತ. ಸೇ. 10ಕ್ಕಿಂತ ಕಡಿಮೆ ನೆಲ ಸಾಗುವಳಿಗೆ ಒಳಪಟ್ಟಿದೆ. ಜಿಲ್ಲೆಯ ಅರಣ್ಯಸಂಪತ್ತು ಯಥೇಷ್ಟವಾಗಿದೆ. ಇಲ್ಲಿಯ ಅರಣ್ಯಗಳಲ್ಲಿ ತೇಗ ಮತ್ತು ಸಾಲ ವೃಕ್ಷಗಳಿವೆ. ಜಿಲ್ಲೆಯ ಪ್ರಮುಖ ಬೆಳೆಗಳು ಬತ್ತ, ಜೋಳ, ಸಜ್ಜೆ. ಈ ಜಿಲ್ಲೆಯ ಜನರಲ್ಲಿ ಸೇ 66ರಷ್ಟು ಮಂದಿ ಗೋಂಡ್ ಆದಿವಾಸಿಗಳು. ಹಲ್ಬಿಗಳೂ ಇದ್ದಾರೆ. ಈ ಜನರು ಅರಣ್ಯಗಳಿಂದ ಕಟ್ಟಿಗೆ, ಮೇಣ, ಜೇನು ಮುಂತಾದುವನ್ನು ಸಂಗ್ರಹಿಸಿ ಮಾರಾಟಮಾಡಿ, ಬೇಟೆಯಾಡಿ ಜೀವಿಸುತ್ತಾರೆ. ಜಿಲ್ಲೆಯಲ್ಲಿ ಕಬ್ಬಿಣದ ಅದುರಲ್ಲದೆ ಅಭ್ರಕವೂ ಸಿಗುತ್ತದೆ.
	ಈ ಜಿಲ್ಲೆಯ ಆಡಳಿತ ಕೇಂದ್ರವಾದ ಜಗದಾಲ್‍ಪುರದ ಜನಸಂಖ್ಯೆ 63,632 (1981), ಜಿಲ್ಲೆಗೆ ಹೆಸರು ನೀಡಿರುವ ಬಸ್ತಾರ್ ಗ್ರಾಮ ಜಗದಾಲ್‍ಪುರಕ್ಕೆ ಸುಮಾರು 19 ಕಿಮೀ. ವಾಯವ್ಯದಲ್ಲಿದೆ. ಜಿಲ್ಲೆಯ ಇತರ ಪ್ರಮುಖ ಸ್ಥಳಗಳು ಕಾಂಕೇರ್ (1085,6) ಮತ್ತು ಕಿರಾಂದುಲ್ (15,710). ಬಸ್ತಾರ್ ಜಿಲ್ಲೆಯ ತಹಸೀಲುಗಳು ಭಾನುಪ್ರತಾಪಪುರ, ಕಾಂಕೇರ್, ನಾರಾಯಣಪುರ, ಕೊಂಡಗಾಂವ್, ಬಿಜಾಪುರ, ದಾಂತೇವಾರ, ಜಗದಾಲ್‍ಪುರ ಮತ್ತು ಕೋಂಟಾ.
(ಬಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ